Avengers: Endgame
ಅವೆಂಜರ್ಸ್: ಎಂಡ್ಗೇಮ್ (ಸೇಡುವಾದಿಗಳು: ಮುಕ್ತಾಯದಾಟ)
ರೇಟಿಂಗ್: ಎರೆಡಿಡ್ಲಿ ಒಂದೆಡೆ (ವೀಣಾ ಸ್ಟೋರ್ಸ್) ಜೊತೆಗೆ ಒಂದು ಜಾಮೂನ್ (ಭಾಗತರಾಂ ಸ್ವೀಟ್ಸ್)

ಬಹುಶಃ ಹಾಲಿವುಡ್ ಚಿತ್ರರಂಗದ ಅತ್ಯಂತ ಜಯಶಾಲಿ ಸಿನೆಮಾ ಸರಣಿ ಎನ್ನಿಸಕೊಳಬಹುದಾದ “ಯಂ. ಸೀ. ಯೂ” ಮರದ ಇಪತ್ತೆರೆಡೆನೆಯ ಪ್ರಯೋಗಫಲ, “ಅವೆಂಜರ್ಸ್: ಎಂಡ್ಗೇಮ್” ಕಳೆದ ವಾರ ಜಗತ್ತಾದ್ಯಂತ ತೆರೆಕಂಡಿತು. ಮಾರ್ವೆಲ್ ಕಾಮಿಕ್ಸ್ಗಳ ಕಥೆಗಳು, ನಾಯಕ-ನಾಯಕಿಗಳನ್ನಾಧಾರಿಸಿ ಸೃಷ್ಟಿಸಿರುವ ಕಥಾಲೋಕ ಇದು. ಸಾಹಸ ಸಿನಿಮಾಪ್ರೇಮಿಗಳು ಈ ಪಿಚ್ಚರಿಗಾಗಿ ಕಾಯುತ್ತಿದ್ದರು ಅಂತ ಹೇಳಿದರೆ, ನಿಂಬೆಯ ಹಣ್ಣು ತುಂಬಾ ಹುಳಿ ಎಂದ ಹಾಗೆ ಇರುತ್ತದೆ. ಅಂಥದ್ದೇನು ಹುಳಿ ಹಿಂಡಿದ್ದಾರೆ ನೋಡೋಣಾಂತ, ನಾನೂ ಹೋಗಿದ್ದೆ.
ವ್ಯಾಪಾರದ ವಿಷಯ: ಒಂದು ಮಣ ದುಡ್ಡು ಮಾಡಿದೆ.
ಕಥೆಯ ಹಿನ್ನೆಲೆ: ಬರೋಬ್ಬರಿ ೨೨ ಸಿನಿಮಾ ಇರುವ ಈ ಸರಣಿಯ ಸಾರಾಂಶ ಹೀಗಿದೆ. (ಎಲ್ಲಿ ಶುರು ಮಾಡೋದಪ್ಪ). ಕಾರಣಾಂತರಗಳಿಂದ ಭೂಲೋಕದಲ್ಲಿ, ಬ್ರಹ್ಮಾಂಡದಲ್ಲಿ, ಯುದ್ಧ ನಡೆಯುತ್ತಿರುತ್ತದೆ. ಬೇರೆ ಬೇರೆ ತಾರಾಮಂಡಲಗಳಲ್ಲಿ, ಗ್ರಹಗಳಲ್ಲಿ “ಸರಿ/ತಪ್ಪು”ಗಳ ತಕಡಿಯಲ್ಲಿ ಕಲಿಯುಗದ ಕೋಲಾಹಲ. ಆದರು, “ಒಳ್ಳೆಯದಕ್ಕಾಗಿ” ಹೋರಾಡುತ್ತಿರುವ ಕೆಲವರಿಂದ ಇನ್ನು ಮಳೆ-ಬೆಳೆಯಾಗಿದ್ದು, ಜೀವನ ನಡೆದು ಬರುತ್ತಿರುತ್ತದೆ. ಯಾರೀ ಪುಣ್ಯಾತ್ಮರು? ದಿ ಅವೆಂಜರ್ಸ್. ಸೇಡುವಾದಿಗಳು. ಭೂಲೋಕದಲ್ಲಿ ಐರನ್-ಮ್ಯಾನ್ (ಈತ ಅಮೇರಿಕಾದವ, ನಮ್ಮ ಲೋಹ ಪುರುಷರ ನೆನೆದು ತಪ್ಪು ತಿಳಿಯಬೇಡಿ), ಕ್ಯಾಪ್ಟನ್ ಅಮೇರಿಕಾ, ಬ್ಲಾಕ್ ವಿಡೋ (ಕಪ್ಪು ವಿಧವೆ ಅಂತ ಒಂದು ಜೇಡದ ಜಾತಿಯ ಹೆಸರಿರುವ ಈಕೆಗೆ ನಿಶ್ಚಿತಾರ್ಥ ಕೂಡ ಆಗಿಲ್ಲ, ಯಾವ ಥರದ ವಿಧವೆನೂ ಅಲ್ಲ; ಬದಲಿಗೆ ರಶಿಯಾ ದೇಶದ ಗೂಡಾಚಾರಿ), ದ ಹಲ್ಕ್ (ಈತ ಸ್ವಲ್ಪ ನಮ್ಮ ಘಟೋತ್ಕಜನ ಥರ), ಥಾರ್ (ಅಸ್ಗಾರ್ಡ್ ಗ್ರಹದ ದೈವಪುತ್ರ ಈತ, ತಾನೇ ಸಾಕ್ಷಾತ್ ಮಿಂಚೇಶ್ವರ) ಸೇರಿದಂತೆ, ಸ್ಪೈಡರ್-ಮ್ಯಾನ್, ಡಾಕ್ಟರ್ ಸ್ಟ್ರೇಂಜ್, ಬ್ಲಾಕ್ ಪ್ಯಾಂಥರ್, ಕ್ಯಾಪ್ಟನ್ ಮಾರ್ವೆಲ್, ಲೋಕಿ (ಇದು ‘ಲೋಕೇಶ’ ಅನ್ನೋನ ಅಡ್ಡಹೆಸರಲ್ಲ, ಥಾರ್-ನ ಸಹೋದರ ಈತ ಚೇಷ್ಟಾದೇವ. ಒಂದು ರೀತಿಯಲ್ಲಿ ಲೋಕಿ/ಲಂಬೋದರ/ಸುಂದರ, ಅನ್ನೋ ಹೆಸರು ಹೊಂದತ್ತೆ ಅನ್ನಿ…) ಹೀಗೆ, ಹಾಲಿವುಡ್ನಲ್ಲಿ ಎಷ್ಟು ಮಂದಿ ಸಿಕ್ಸ್ ಪ್ಯಾಕ್ ಉಳ್ಳವರಿದ್ದಾರೋ, ಅಷ್ಟು ಸಂಖೆಯ ಸೂಪರ್-ಹೀರೋಗಳು “ಸತ್ಯ”ಕ್ಕಾಗಿ ಹೋರಾಡುತ್ತಿರುತ್ತಾರೆ. ೨೨ರಲ್ಲಿ ಸುಮಾರು ೧೯ ಪಿಚ್ಚರಿನಲ್ಲಿ ಥರಾಥರಿ ವೈರಿಗಳನ್ನ ಎದುರಿಸಿ, ಏಟುತಿಂದು, ಪೆಟ್ಟುಗೊಂಡು, ಡೈಲಾಗ್ ಹೊಡೆದು, ಸ್ವಲ್ಪ ನಮ್ಮ ಶಾರುಖ್-ನ ಥರ ಸೋತು ಹೋದಂತೆ ಮಾಡಿ ಗೆದ್ದು ಬಂದು ಸಿನಿಮಾ ರಸಿಕರ ಮನಗೆದ್ದಿರುತ್ತಾರೆ. ಆದರೆ ಅಲ್ಲಿಯ ತನಕ ನಮ್ಮ ಬೊಂಬಾಟ್-ನಾಯಕರ ಹತ್ತಿರ ಒದೆ ತಿಂದವರೆಲ್ಲರೂ ಬರೀ ಸೈಡ್ ವಿಲ್ಲನ್ಗಳಾಗಿದ್ದು, “ದಿ ಅವೆಂಜರ್ಸ್” (೨೦೧೨ರಲ್ಲಿ ಬಿಡುಗಡೆಯಾಗಿದ್ದು) ಪಿಚ್ಚರಿನಲ್ಲಿ ಮೊದಲ ಬಾರಿಗೆ ಮೈನ್ ವಿಲ್ಲನ್ ಯಾರೆಂದು ತಿಳುಯುತ್ತೇವೆ. ಥ್ಯಾನೋಸ್. ಸಾವಿಗೆ ಮತ್ತೊಂದು ಹೆಸರನ್ನ ತನ್ನದೇ ಹೆಸರಾಗಿಸಬೇಕೆಂಬ ಅಸೆ, ಥ್ಯಾನೋಸ್ಇಗೆ. ಬಹುಶಃ ಕನ್ನಡದಲ್ಲಿ ಈ ಚಿತ್ರವನ್ನ ಮಾಡಿದ್ದರೆ, ಈ ಪಾತ್ರದ ಧ್ವನಿಯನ್ನ ದಿ. ಸುಂದರಕೃಷ್ಣ ಅರಸರ ಹತ್ತಿರ ಮಾಡಿಸಿರುವರೇನೋ. ಭಯಾತ್ಮಕ ಧ್ವನಿ, ಗಾತ್ರ, ಜಾಣ್ಮೆ, ಕ್ರೌರ್ಯ ಎಲ್ಲಾದರ ಪರಮಾವಧಿಯಾದ ಥ್ಯಾನೋಸ್, ಬ್ರಹ್ಮಾಂಡದಲ್ಲಿ “ಇಂಫಿನಿಟಿ ಸ್ಟೋನ್ಸ್”ಅನ್ನು (“ಅನಂತ ರತ್ನಗಳು”, ಇವು ಬ್ರಹ್ಮಾಂಡದಲ್ಲೆಲ್ಲಾ ಸೇರಿ, ಆರೇ ಇವೆಯಂತೆ.) ಹುಡುಕುತ್ತಿರುತ್ತಾನೆ. ಆರೂ ಕಲ್ಲು ಸೇರಿಸಿದವ ತಾನೇ ಸಾಕ್ಷಾತ್ ಬ್ರಹ್ಮನ ಥರ ಆಗಿ, ಒಂದು ಚಿಟಿಕೆಯ ಹೊಡೆದು ಬ್ರಹ್ಮಾಂಡವನ್ನೇ ನಾಶ ಮಾಡಬಲ್ಲವನಾಗುತ್ತಾನೆ. “ದ ಅವೆಂಜರ್ಸ್: ಇಂಫಿನಿಟಿ ವಾರ್ಸ್” (೨೦೧೮ರಲ್ಲಿ ಬಿಡುಗಡೆಯಾದದ್ದು) ಸಂಚಿಕೆಯಲ್ಲಿ ಇದನ್ನು ಸಾಧಿಸಿಯೇ ಬಿಟ್ಟು, ಥ್ಯಾನೋಸ್ ಆರೂ ಕಲ್ಲನ್ನ ಕೈಕವಚ (ಇಂಗ್ಲೀಷಿನಲ್ಲಿ ‘ಗಾಂಟ್ಲೆಟ್’ ಅನ್ನುವುದು) ಒಂದಕ್ಕೆ ಅಂಟಿಸಿ ಭೂಲೋಕದಲ್ಲಿದ್ದಾಗ, ಚಿಟಿಕೆ ಹೊಡೆದಿರುತ್ತಾನೆ. ಆ ಕ್ಷಣದಲ್ಲಿ ಜಗತ್ತಿನಲ್ಲಿರುವ ಜೀವಿಗಳಲ್ಲಿ ಅರ್ಧದಷ್ಟು ಜೀವಗಳು ನಾಶವಾಗಿರುತ್ತವೆ. ಈ ಪ್ರಳಯಾತ್ಮಕ ಜಗತ್ತಿನಲ್ಲಿ, ನಮ್ಮ ನಾಯಕ ನಾಯಕಿಯರಲ್ಲೂ ಕೆಲವರು ಭಸ್ಮವಾಗಿ ಹೋಗಿರುತ್ತಾರೆ. ಇನ್ನು ಮುಂದೆ ಈ ಕಥೆಯಲ್ಲಿ ಇನ್ನೇನು ಮಸಾಲೆಗಳು ಮೂಡಿ ಬರುತ್ತವೆ ಎಂಬುದು, “ದಿ ಅವೆಂಜರ್ಸ್: ಎಂಡ್ಗೇಮ್”ನ ಕಥನ.

ಪ್ರಸ್ತುತಿ: ಈ ಪಿಚ್ಚರಿನಲ್ಲಿ ಬರುವಂತಹ ದೃಶ್ಯಗಳು, ನೋಡುವವರನ್ನ ಆ ಕಥಾಪ್ರಪಂಚದಲ್ಲಿ ತಲ್ಲೀನಗೊಳಿಸುತ್ತದೆ. ೨೨ ಪಿಚ್ಚರ್ಗಳಲ್ಲಿ ಪ್ರತಿ ಸಂಚಿಕೆ ಬಂದಹಾಗೆ ಒಂದಕ್ಕಿಂತ ಒಂದರಲ್ಲಿ ಕಂಪ್ಯೂಟರ್ ಗ್ರ್ಯಾಫಿಕ್ಸ್ ಅಷ್ಟಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಳಿಸಿ, ಪ್ರತೀ ಹಂತಕ್ಕೂ ಅದರ ಗುಣಮಟ್ಟದಲ್ಲಿ ಕಂಡು ಬಂದಿರುವ ಅಭಿವೃದ್ಧಿ ನಿಜಕ್ಕೂ ಶ್ಲಾಘನೀಯ. ಚಿತ್ರಕಥೆ ಅತ್ಯಂತ ಬಿಗಿಯಾಗಿ ಕಟ್ಟಿದ್ದಾರೆ; ಅದಕ್ಕೆ ಅನುಗುಣವಾಗಿ ಸಂಕಲನ ಕೂಡ, ಬೇರೆ ಬೇರೆ ಶಾಟ್-ಗಳು, ದೃಶ್ಯಗಳು ಸೇರುವ ಕ್ಷಣಗಳು ತಿಳಿಯದೆಯೇ ಇರುವಷ್ಟು ಹಗೂರವಾಗಿ ಇದೆ. ಬರೀ ಚಿತ್ರಕಥೆ ಅಲ್ಲ, ಹಿನ್ನೆಲೆ ಸಂಗೀತ ಕೂಡ, ನಮ್ಮ ಗಮನವನ್ನ ಗಟ್ಟಿಯಾಗಿ ಹಿಡಿದಿಡುತ್ತದೆ. ಒಂದು ಮಾತು ಹೇಳೋದಾದರೆ, ಪಿಚ್ಚರ್ ಶುರುವಾದಾಗ, ಚಿತ್ರಮಂದಿರದಲ್ಲಿ ನನ್ನ ಮುಂದೆ ಕೂತ ಕೆಲವು ದಡ್ಡ ನನ್ನ ಮಕ್ಕಳು, ಒಂದೇ ಸಮನೆ ಮಾತನಾಡುತಿದ್ದರು. ಸುಮಾರು ೩೦-೪೦ ನಿಮಿಷಗಳ ನಂತರ ಅವರ ಬಾಯಿಗೆ ಬೀಗ ಬಿದ್ದು, ಪಿಚ್ಚರಿನಲ್ಲಿ ಎಲ್ಲರು ತಲ್ಲೀನರಾಗಿದ್ದರು. ಇನ್ನೇನು ಬೇಕು ಹೇಳಿ.
ಕಥೆ: ಕಥೆ ಬೇಕು ಇವರೇ. ಆದರೆ “ದಿ ಅವೆಂಜರ್ಸ್: ಎಂಡ್ಗೇಮ್” ಚಿತ್ರಕ್ಕೆ ಇರುವ ಹಡ್ವಾಂಟೆಜ್ ಏನಪ್ಪಾ ಅಂದರೆ, ಕಳೆದ ೨೧ ಪಿಚ್ಚರ್-ಗಳಲ್ಲಿ ಇಲ್ಲಿಯರಗೆ, ಕಥೆ ಬೆಳೆಸಿಕೊಂಡು ಬಂದಿರುವ ರೀತಿ ಹೇಗಿದೆ ಅಂದರೆ, ಶುರುವಿನ ಒಂದು ಘಂಟೆಯ ಕಾಲ ಬಿಟ್ಟು, ಮಿಕ್ಕ ಎರಡು ಘಂಟೆ (ಹೌದ್ರಿ, ೧೮೦ ನಿಮಿಷ ಇದೆ ಒಟ್ಟು, ಈ ಪಿಚ್ಕಾರ್) ನಮ್ಮ ಹಳೆಯ ಕನ್ನಡ ಪಿಚ್ಚರ್ ಕ್ಲೈಮಾಕ್ಸ್-ಗಳ ಥರ, ಪಿಚ್ಚರ್ನಲ್ಲಿ ಇರುವರೆಲ್ಲರು ಬಂದು ಒಂದು ಗುಡ್ಡದ ಮೇಲೆ ಫೈಟಿಂಗ್ ಮಾಡ್ತಾರೆ. ಅಜ್ಜಿ ಕ್ಯಾರೆಕ್ಟರ್ ಮಿಸ್ಸಿಂಗ್, ಅಷ್ಟೇ. ಅಲ್ಲಲ್ಲಿ ಪಂಚ್ ಡೈಲಾಗ್ ಇವೆ, ಕಾಮಿಡಿ ಇದೆ, ಒಮ್ಮೊಮ್ಮೆ ಕಣ್ಣೀರು ಕೂಡ ಬರತ್ತೆ. ಹೇಳದ್ನಲ್ಲ, ಕನ್ನಡ ಪಿಚ್ಚರ್ ಅಂತ. ಎಲ್ರು ಒಂದ್ ಸ್ವಲ್ಪ ಎಕ್ಸ್ಟ್ರಾ ಬೆಳ್ಗಿದಾರೆ ಅಷ್ಟೇ. ಇಡೀ ಕಥಾಸರಣಿಯನ್ನ ನೋಡಿರುವವರು, ಇದು ತಕ್ಕ ಮುಕ್ತಾಯವಾಗಿದೆ ಎಂದು ಒಮ್ಮತ ನೀಡಿದ್ದಾರೆ.
ಕಿಟಿ-ಕಿಟಿ: ಇದು ಅಷ್ಟಾಗಿ ಚಿಂತಾತ್ಮಕ ಚಿತ್ರವಲ್ಲ. ಅಲ್ಲ, ಅದು ತಪ್ಪು ಅಂತ ಅಲ್ಲ. ಖಂಡಿತ ಮನೋರಂಜನೆಗೂ ಬೆಲೆ ಇದೆ. ಆದರೆ, ಇದು ಸಾಧಾರಣವಾದ ಸಿನಿಮಾ ಅಂತು ಅಲ್ಲ. ೨೨ ಸಂಚಿಕೆಗಳ ಮಹಾಸಿನಿಮಾ. ಕೊನೆಗೂ ಏನು ಹೇಳಬಯಸುತ್ತಾರೆ? ಈ ರೀತಿಯ ಉತ್ಪ್ರೇಕ್ಷಿತ ಹಿಂಸಾಚಾರ, ಹೊಡೆದಾಟ ಹೀಗೆ ಅಲಂಕೃತವಾಗಿ ತೋರಿಸಿ ಏನು ಸಂದೇಶ ಕೊಡುತ್ತಿದ್ದಾರೆ? ಬೇಡ ಬಿಡಿ, ಇದು ತುಂಬಾ ಹಳೆಯ ಪ್ರಶ್ನೆ. ನಿಜಜೀವನದಲ್ಲಿಯೇ ನಮ್ಮ ರಾಜಕಾರಿಣಿಗಳು ಹಿಂಸೆ, ಹತ್ಯೆಬಗ್ಗೆ ಎಷ್ಟು ನಿರರ್ಗಳವಾಗಿ ಮಾತಾಡುತ್ತಾರೆ. ಆರ್ಟ್ ರೆಫ್ಲೆಕ್ಟ್ಸ್ ಲೈಫ್. ಆದರೆ ಇದು ಮಾರಲ್ ಸೈನ್ಸ್ ಕ್ಲಾಸ್ ಅಲ್ಲ. ಕೇವಲ ಸಿನಿಮಾ ರಸಿಕತೆಯ ದೃಷ್ಟಿಯಿಂದ ನೋಡಿದರೆ ಇದರದ್ದು ಸಮಸ್ಯೆ ಹೀಗೆ: ಪ್ರತಿ ಸಂಚಿಕೆಯಲ್ಲೂ ಬೆಳೆಯುವ ಸಂಘರ್ಷದ ಸನ್ನಿವೇಶಗಳು ಪ್ರಮಾಣದಲ್ಲಿ ಸತತವಾಗಿ ದೊಡ್ಡದಾಗಿ, ಯಾವ ಒಂದು ವ್ಯಕ್ತಿ ಅಥವಾ ವಿಷಯದ ಬಗ್ಗೆ ಆಳವಾಗಿ ಕಾಳಜಿ ವಹಿಸದೆ ಇರುವಹಾಗಾಗಿದೆ. ಮೊದಲನೆಯ ಐರನ್-ಮ್ಯಾನ್-ನಲ್ಲಿ ಟೋನಿ ಬದುಕುತ್ತಾನಾ? ಪೆಪ್ಪರ್ ಬದುಕುತ್ತಾಳ? ಇವೆ ಪ್ರಶ್ನೆಗಳು. ಮೊದಲನೆಯ ಕ್ಯಾಪ್ಟನ್ ಅಮೇರಿಕಾ ಚಿತ್ರದಲ್ಲಿ, ಈ ಊರು ಉಳಿಯುತ್ತದ? ಕ್ಯಾಪ್ಟನ್ ಉಳಿಯುತ್ತಾನ? ಐರನ್-ಮ್ಯಾನ್ ೩ನೇ ಭಾಗದಲ್ಲಿ, ಆತಂಕವಾದಿಗಳಿಂದ ಅಮೇರಿಕ ಸರ್ಕಾರವೇ ಕುಸಿದು ಹೋಗುವ ಸಾಧ್ಯತೆಯಲ್ಲಿದೆ. ಹೀಗೆ ಬೆಳೆದು, “ದಿ ಅವೆಂಜರ್ಸ್” (೨೦೧೨) ಹೊತ್ತಿಗೆ ಇಡೀ ಭೂಲೋಕ ಥ್ಯಾನೋಸ್ ಸೇನೆಯ ಆರ್ಭಟದಲ್ಲಿ ಸಿಕ್ಕಿಬಿದ್ದಿದೆ. ಇನ್ನ “ದಿ ಅವೆಂಜರ್ಸ್: ಎಂಡ್ಗೇಮ್”ನಲ್ಲಂತು ಭೂಲೋಕ, ಬ್ರಹ್ಮಾಂಡ, ಭವಿಷ್ಯ ಅಷ್ಟೇ ಅಲ್ಲ, ಗತಕಾಲವೂ ಕೂಡ ಚೆಲ್ಲಪಿಲ್ಲಿಯಾಗುವ ಅಪಾಯದಲ್ಲಿದೆ. ಮಾರ್ವೆಲ್ ಕಡೆಯಿಂದ ಇನ್ನಷ್ಟು ಸಿನಿಮಾಗಳು ಬರುತ್ತಿವೆಯಂತೆ. ಇನ್ನೇನು ಉಳಿದಿದೆ?! ಭೂಲೋಕ, ಬ್ರಹ್ಮಾಂಡ, ಭವಿಷ್ಯ ಎಲ್ಲವನ್ನ ಆಗಲೇ ಕಾಪಾಡಾಯಿತು. ಮತ್ತಷ್ಟು ಲೋಕಗಳನ್ನ ಹುಟ್ಟಿಸಿ, ಅದನ್ನ ಕಾಪಾಡುತ್ತಾರಂತೆ. ಅಲ್ಲ, ಖಡಾ-ಖಂಡಿತವಾಗಿ ಇಂಥ ಸಿನಿಮಾಗಳು ಒಳ್ಳೆಯದಲ್ಲ ಅಂತ ಹೇಳುತ್ತಿಲ್ಲ, ನಾನೇ ಈ ೨೨ ಪಿಚ್ಚರ್ಗಳಲ್ಲಿ ೧೫ಅನ್ನ ಸಿನಿಮಾ ಮಂದಿರದಲ್ಲೇ ನೋಡಿದೀನಿ. ಆದರು ಅಸಮಾಧಾನ ಆಗೋ ವಿಷಯ ಎಲ್ಲೋ ಒಂದು ಕಡೆ, ಪಿಚ್ಚರ್ ಬಜೆಟ್, ಗ್ರಾಫಿಕ್ಸ್, ದ್ರಾಕ್ಷಿಗೊಂಚಲಿನ ಥರ ತಾರಾಂಗಣ, ಇದು ಮಾತ್ರ ಜನ ಮೆಚ್ಚುವಂಥ ಸಿನಿಮಾವೇ? ಹೀಗೆ ಹೇಳಿ, ನನ್ನ ಎರೆಡು ಮಾತುಗಳನ್ನ ಮುಗಿಸುತ್ತೀನಿ. (ಈ ವಿಷಯವನ್ನ ದೀರ್ಘವಾಗಿ ಚರ್ಚೆ ಮಾಡಿರುವ ಒಂದು ವಿಡಿಯೋ ಎಸ್ಸೆ – ದೃಶ್ಯಾತ್ಮಕ ಪ್ರಬಂಧ – ಈ ಕೆಳಗೆ ಸೇರಿಸಿದೆ.)
